ನದೀ ಇಂಜಿನಿಯರಿಂಗ್ -
ಸಾಗಣೆಯ ವಿವಿಧೋದ್ದೇಶಗಳಿಗಾಗಿ ನದಿ ಮತ್ತು ಅದರ ದಡಗಳ ಬಳಕೆ ಮತ್ತು ಅವುಗಳ ಅಭಿವರ್ಧನೆ (ರಿವರ್ ಎಂಜಿನಿಯರಿಂಗ್). ಪ್ರಾಚೀನ ನಾಗರಿಕತೆಯ ಕೇಂದ್ರಗಳು ನದಿಗಳ ಕಣಿವೆಗಳಲ್ಲಿ ವಿಕಸಿಸಿದವು. ಆಧುನಿಕ ಯಂತ್ರಯುಗದಲ್ಲಿ ನದಿಗಳ ಮೇಲೆ ಜಲಯಾನ ಮುಂದುವರಿದಿದೆ. ನದಿಯ ಪಾತ್ರೆಯನ್ನು ಕಿರಿದಾಗಿ ಮಾಡಿ ನೀರಿನ ಆಳವನ್ನು ಹೆಚ್ಚಿಸಿ ಎಲ್ಲ ಕಾಲಗಳಲ್ಲಿಯೂ ಜಲಯಾನ ಸಾಧ್ಯವಾಗುವ ಹಾಗೆ ಮಾಡಲಾಗಿದೆ. ದಡಗಳನ್ನು ಭದ್ರಗೊಳಿಸಿ ಪ್ರವಾಹ ಕಾಲದಲ್ಲಿ ಹೊಳೆ ಅದರ ಅಕ್ಕಪಕ್ಕದ ಗದ್ದೆ, ಪಟ್ಟಣ, ಸೇತುವೆಗಳ ಮೇಲೆ ನುಗ್ಗದ ಹಾಗೆ ನಿಯಂತ್ರಿಸಲಾಗಿದೆ. ನದಿಗಳಿಗೆ ಅಡ್ಡವಾಗಿ ಕಟ್ಟೆಗಳನ್ನು ಕಟ್ಟಿ ಜಲಾಶಯದಿಂದ ನೀರನ್ನು ದಡದ ಮೇಲೆ ನಾಲೆಗಳ ಮೂಲಕ ಸಾಗಿಸಿ ಖುಷ್ಕಿ ಭೂಮಿಯನ್ನು ಗದ್ದೆಗಳಾಗಿ ಪರಿವರ್ತಿಸಲಾಗಿದೆ. ಜಲಯಾನವಿರುವ ನಾಲೆಗಳಲ್ಲಿ ಮಟ್ಟ ಬದಲಾವಣೆಯ ಕಟ್ಟೆಗಳನ್ನು ಕಟ್ಟಿ ದೋಣಿಗಳು ಎಲ್ಲ ಕಡೆಗಳಿಗೂ ಹೋಗುವಂತೆ ಮಾಡಿದ್ದಾರೆ. ದೊಡ್ಡದಾದ ಒಂದು ನದಿಯ ಇಂಜಿನಿಯರಿಂಗ್ ಸಮಸ್ಯೆಗಳನ್ನು ಎದುರಿಸುವಾಗ ನದಿಯ ಇಳುಕಲು ತಿರುವುಗಳು, ಅದರ ಹರಿವಿನಲ್ಲಿ ತಿಂಗಳು ತಿಂಗಳಿಗೂ ಆಗುವ ವ್ಯತ್ಯಾಸ, ಅದು ಸಾಗಿಸುವ ಗೋಡು ಮಣ್ಣಿನ ಪ್ರಮಾಣ ಮುಂತಾದವನ್ನು ಗಮನಿಸಬೇಕಾಗುತ್ತದೆ.

  	ನದಿ ಹರಿವ ಪಾತ್ರ ವರ್ಷವಿಡೀ ಗೋಡು ಮಣ್ಣು ತುಂಬಿ ಎತ್ತರವಾಗದೆ ಮತ್ತು ತಳದ ಮಣ್ಣು ತೊಳೆದು ಹೋಗಿ ತಗ್ಗದೆ ಇದ್ದರೆ ಆ ಪಾತ್ರ ಭದ್ರವಾದುದೆಂದು ಹೇಳುವೆವು. ಎಷ್ಟೋ ನದಿಗಳು ದಡವನ್ನು ಒಂದು ಕಡೆ ಕೊರೆದು ಇನ್ನೊಂದು ಕಡೆ ಮಣ್ಣು ತುಂಬುವುದುಂಟು. ಕಾವೇರಿ ತುಂಗಭದ್ರಾ ಮೊದಲಾದ ನದಿಗಳ ಮೇಲುಗಡೆಯ ಪಾತ್ರಗಳೆಲ್ಲ ಭದ್ರವಾಗಿವೆ. ಆದರೆ ಅವು ಸಮುದ್ರದ ಹತ್ತಿರ ಹೋದಂತೆ ಮೆಕ್ಕಲು ಮಣ್ಣಿನಲ್ಲಿ ಹರಿಯುವುದರಿಂದ ದಡಗಳು ಸವೆತ ತಡೆಯದಿದ್ದರೆ ಪಾತ್ರ ಅಗಲವಾಗಿ ತಟ್ಟೆಯಾಗಿರುತ್ತದೆ; ಹೀಗಲ್ಲದೆ ದಡಗಳು ಸವೆತ ತಡೆಯುವಷ್ಟು ಗಟ್ಟಿಯಾಗಿದ್ದರೆ ಪಾತ್ರ ಕಿರಿದಾಗಿ ಆಳವಾಗಿರುತ್ತದೆ. 

  	ನದಿಗಳ ಮಾರ್ಗಗಳನ್ನು ಮೂರು ಬಗೆಯಾಗಿ ವಿಂಗಡಿಸಿದೆ: 1. ನೇರವಾಗಿರುವವು, 2. ತಿರುವುಗಳು ವಿಶೇಷವಾಗಿರುವವು, 3. ಎರಡು ದಾರಿಗಳು ಸೇರಿ ಜಡೆಯಾಗಿ ಹೊಸೆದಿರುವವು.
 
 	ಹೊಳೆಯಲ್ಲಿ ಹರಿಯುವ ನೀರು, ಮಣ್ಣಿನ ಸ್ವಭಾವ, ಹೊಳೆ ಸಾಗಿಸುವ ಗೋಡು ಮಣ್ಣಿನ ಪ್ರಮಾಣ ಇವು ನದಿಯ ಮಾರ್ಗದ ಮೇಲೆ ಪರಿಣಾಮ ಬೀರುತ್ತವೆÉ. ನದಿಯ ಇಳುಕಲಿಗೂ ಈ ಮಾರ್ಗಕ್ಕೂ ಸಂಬಂಧವುಂಟು. ನೇರವಾದ ನಾಲೆಗಳನ್ನು ಇಳುಕಲು ಬಹಳ ಕಡಿಮೆಯಾಗಿರುವ ಮತ್ತು ಹೆಚ್ಚಾಗಿರುವ ನದಿಗಳಲ್ಲಿ ಕಾಣಬಹುದು. ಮಧ್ಯವರ್ತಿಯಾದ ಇಳುಕಲಿನಲ್ಲಿ ಹರಿಯುವ ನದಿಗಳು ಹೆಚ್ಚಾಗಿ ಅಂಕುಡೊಂಕಾಗಿರುತ್ತವೆ. ನದಿಯ ಇಳುಕಲಿಗೂ ಅದರ ಪಾತ್ರದ ಆಕಾರಕ್ಕೂ ಇರುವ ಸಂಬಂಧವನ್ನು ತಿಳಿಯಲು ಇನ್ನೂ ಸಂಶೋಧನೆಗಳು ನಡೆಯಬೇಕಾಗಿವೆ. ಇದು ತಿಳಿಯದೆ ನದಿಗಳ ಡೊಂಕುಗಳನ್ನು ನೇರವಾಗಿ ಮಾಡುವ ಪ್ರಯತ್ನಗಳು ವಿಫಲವಾಗಿವೆ. ಹಾಗೆಯೇ ನದಿಯ ಇಳುಕಲು ಹೆಚ್ಚಾಗಿರುವ ಕಡೆ ತಿರುವುಗಳನ್ನು ಜೋಡಿಸುವುದೂ ಸಾಧ್ಯವಾಗಿಲ್ಲ. ಅಭದ್ರವಾದ ಪಾತ್ರವುಳ್ಳ ನದಿಗಳಲ್ಲಿ ಅವುಗಳ ಇಳುಕಲು ಎಷ್ಟೇ ಇರಲಿ ಎರಡು ದಾರಿಗಳು ಸೇರಿ ಜಡೆಯಾಗಿ ಹರಿಯುವ ಜಾಡುಗಳನ್ನೂ ಕಾಣಬಹುದು.

  	ಜಲಯಾನ ಯೋಗ್ಯವಾದ ನದಿಗಳ ಇಂಜಿನಿಯರಿಂಗ್: ಇಂಥ ನದಿಗಳಲ್ಲಿ ಇಂಜಿನಿಯರಿಂಗ್‍ನ ಮೊದಲನೆಯ ಉದ್ದೇಶ ಜಲಯಾನಕ್ಕೆ ಅವಶ್ಯವಾದ ನೀರಿನ ಆಳವನ್ನು ಒಂದೇ ಸಮವಾಗಿ ಒದಗಿಸುವುದು. ಈ ಉದ್ದೇಶವನ್ನು ಬೇರೆ ಬೇರೆ ನದಿಗಳಲ್ಲಿ ಪ್ರತ್ಯೇಕವಾದ ಉಪಾಯಗಳಿಂದ ಸಾಧಿಸುತ್ತಾರೆ.

  	ಪಾತ್ರವನ್ನು ಕಿರಿದಾಗಿ ಮಾಡುವುದು: ನೈಸರ್ಗಿಕ ಸ್ಥಿತಿಯಲ್ಲಿ ನದಿಯ ಪಾತ್ರದ ಆಳದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಹಳ ವ್ಯತ್ಯಾಸ ಇರುವುದು. ಮಧ್ಯೆ ತಿರುವುಗಳಲ್ಲಿ ಆಳವಾಗಿ ನಡುವೆ ಆಳ ಕಡಿಮೆಯಾಗಿರುವ ಭಾಗಗಳಿರಬಹುದು. ಆದರೆ ಹೊಳೆಯ ಜಲಯಾನಯೋಗ್ಯತೆ ತೆಟ್ಟೆಯಾಗಿರುವ ಭಾಗಗಳ ಆಳವನ್ನು ಅವಲಂಬಿಸಿದೆ. ತೆಟ್ಟೆ ಜಾಗಗಳನ್ನು ತೋಡಿ ಆಳಮಾಡಬಹುದು. ಹಾಗಲ್ಲದೆ ಆ ಪಾತ್ರವನ್ನೇ ಕಿರಿದು ಮಾಡಿ ಬೇಸಗೆ ವೇಳೆ ಅದರಲ್ಲಿ ಹರಿಯುವ ನೀರೇ ಅದನ್ನು ಬೇಕಾದ ಆಳಕ್ಕೆ ತುಂಬುವ ಹಾಗೆ ಮಾಡಬಹುದು. ಆಗ ಪಾತ್ರದಲ್ಲಿರುವ ಗೋಡು ಮಣ್ಣು ನೀರಿನ ಅಧಿಕ ವೇಗದಲ್ಲಿ ಕೊಚ್ಚಿಹೋಗುತ್ತದೆ. ತೆಟ್ಟೆ ಭಾಗದಲ್ಲಿ ನೀರಿಗೆ ದಾರಿ ತೋರಿಸಲು ಕಲ್ಲಿನ ಎರಡು ತಗ್ಗು ಗೋಡೆಗಳನ್ನು ಉದ್ದವಾಗಿ ಕಟ್ಟಿ ಅವನ್ನು ನದಿಯ ದಡಗಳಿಗೆ ತಗ್ಗಾದ ಕಲ್ಲಿನ ತಡೆಗಟ್ಟುಗಳಿಂದ ಸೇರಿಸಬಹುದು. ಆಗ ಗೋಡು ಮಣ್ಣು ಮತ್ತು ನದಿಯ ತಳದಲ್ಲಿ ಚಲಿಸುವ ಸಾಮಗ್ರಿ ಈ ತಡೆಗಟ್ಟುಗಳ ಬಳಿ ನಿಲ್ಲುತ್ತವೆ; ಮತ್ತು ಗೋಡೆಗಳ ನಡುವಿನ ಜಾಡಿನಲ್ಲಿ ನೀರು ಧಾರಾಳವಾಗಿ ಹರಿಯುತ್ತದೆ. ತಿರುವುಗಳ ಒಳಭಾಗದÀ ಏರಿಗಳಲ್ಲಿ ಕಲ್ಲನ್ನು ಜೋಡಿಸಿ ಚಾಪೆಗಳಿಂದ ಮುಚ್ಚಿ ಮೇಲೆ ಕಲ್ಲುಗಳನ್ನು ಹೇರಬಹುದು. ಆಗ ಕೊರೆತ ತಿರುವುಗಳವರೆಗೂ ಮುಂದುವರಿಯುವುದು ತಪ್ಪುತ್ತದೆ.

  	ನದಿಯ ನೀರಿಗೆ ದಾರಿ ತೋರಿಸುವುದು: ತಿರುವುಗಳ ಉದ್ದವನ್ನು ಕಡಿಮೆ ಮಾಡುವುದರಿಂದಲೂ ಅವು ಡೊಂಕಾಗಿದ್ದಾಗ ಅಡ್ಡಗೋಡೆಗಳಿಂದ ತಿರುಗಿಸುವುದರಿಂದಲೂ ಜಲಯಾನಕ್ಕೆ ಅನುಕೂಲವಾಗುತ್ತದೆ. ಈ ವಿವರವನ್ನು ಪ್ರಯೋಗ ಶಾಲೆಗಳಲ್ಲಿ ಮಾದರಿಗಳಿಂದ ನಿರ್ಣಯಿಸುವುದು ಉತ್ತಮ. ಗೋಡುಮಣ್ಣನ್ನು ಸಾಗಿಸುವ ನದಿಯ ನೇರವಾದ ಭಾಗದಲ್ಲಿ ಬಲಕ್ಕೊ ಎಡಕ್ಕೊ ಹೆಚ್ಚು ಗೋಡು ಮಣ್ಣು ತುಂಬಿದಾಗ ತಿರುವುಗಳು ಪ್ರಾರಂಭವಾಗುತ್ತವೆ. ಆಗ ಗೋಡು ಮಣ್ಣು ತುಂಬಿರುವ ದಿಕ್ಕಿನಲ್ಲಿಯೇ ಇನ್ನೂ ಹೆಚ್ಚು ಗೋಡು ಸೇರುತ್ತದೆ. ಎದುರು ದಿಕ್ಕಿನಲ್ಲಿ ಗೋಡು ನಿಲ್ಲುವುದಿಲ್ಲ. ಹೀಗಾಗಿ ನೇರವಾಗಿದ್ದ ಭಾಗದಲ್ಲಿ ಒಂದು ತಿರುವು ಪ್ರಾರಂಭವಾಗಿ ಕೊಂಚ ಮುಂದೆ ಎದುರು ದಿಕ್ಕಿನಲ್ಲಿ ಇನ್ನೊಂದು ತಿರುವು ಕಾಣಿಸಿಕೊಳ್ಳುತ್ತದೆ. ಸುಲಭವಾಗಿ ಕೊರೆದು ಹೋಗುವ ಭೂಮಿಯಲ್ಲಿ ಗೋಡಿನಿಂದ ತುಂಬಿದ ನದಿಯಲ್ಲಿ ತಿರುವುಗಳ ಹರವು ಹೆಚ್ಚಿ, ಪ್ರವಾಹದ ನೀರು ಎರಡು ತಿರುವುಗಳ ನಡುವಣ ಗಡ್ಡೆಯನ್ನು ಕೊರೆದು ನೇರವಾಗಿ ಹರಿಯುತ್ತದೆ.

  	ನಾಲೆಗಳಾಗಿ ಮಾಡಿದ ನದಿಗಳು: ನದಿಯ ಮೇಲಿನ ಮಜಲುಗಳಲ್ಲಿ ನೀರಿನ ಆಳವನ್ನು ದೋಣಿಗಳು ಸಾಗುವ ಹಾಗೆ ಹೆಚ್ಚಿಸಬೇಕಾದರೆ ಪಾತ್ರವನ್ನು ಕಿರಿದಾಗಿ ಮಾಡಬೇಕಾಗುತ್ತದೆ. ಅಂಥ ಕಡೆಗಳಲ್ಲಿ ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ಅವುಗಳ ನಡುವೆ ನದಿಯ ತಳವನ್ನು ತೋಡಿ ನೀರಿನ ಆಳವನ್ನು ಹೆಚ್ಚಿಸಬಹುದು. ಆಗ ನದಿಯ ತಳ ಮಜಲುಮಜಲಾಗಿ ಇಳಿಯುತ್ತದೆ. ಇಲ್ಲಿ ದೋಣಿಯನ್ನು ಸಾಗಿಸಬೇಕಾದರೆ ಮಟ್ಟ ಬದಲಾವಣೆಯ ಸಂದು (ಲಾಕ್ಸ್) ಕಟ್ಟೆಗಳನ್ನು ಕಟ್ಟೆಯ ಒಂದು ಕೊನೆಯಲ್ಲಿ ಕಟ್ಟಬೇಕು. ಈ ಪರಿಸ್ಥಿತಿಯಲ್ಲಿ ನದಿಯ ಪಾತ್ರ ಅನೇಕ ನಾಲೆಗಳಾಗಿ ವಿಂಗಡವಾಗುತ್ತದೆ.
 
 	ಭರತದ ನದಿ : ಸಾಮಾನ್ಯವಾಗಿ ಎಲ್ಲ ನದಿಗಳೂ ನದೀಮುಖದಿಂದ ಸ್ವಲ್ಪ ದೂರದವರೆಗೆ ಭರತದ ಉಬ್ಬರವಿಳಿತಕ್ಕೆ ಒಳಗಾಗುತ್ತದೆ. ಇಂಥ ನದಿಗಳಲ್ಲಿ ಪಾತ್ರ ನಿಧಾನವಾಗಿ ಗೋಡು ಮಣ್ಣಿನಿಂದ ತುಂಬುತ್ತದೆ. ಕೆಲವು ವೇಳೆ ನೀರು ನದಿಯಲ್ಲಿ ಕಡಿಮೆ ಆಗಿದ್ದಾಗ ಗೋಡು ಮುಂದೆ ಬರುವ ಅಲೆಯಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗುವುದಿಲ್ಲ. ಆಗ ಭರತ ನದಿಯ ಪ್ರವಾಹವನ್ನು ಎದುರಿಸಬೇಕಾಗುತ್ತದೆ. ಆದರೆ ಇಳಿತದಲ್ಲಿ ಪ್ರವಾಹದ ನೀರಿಗೆ ಭರತದ ಕಾಲದಲ್ಲಿ ಹಿಂದೆ ಕೂಡಿಹಾಕಿಕೊಂಡಿದ್ದ ನದಿಯ ನೀರೂ ಸೇರಿ ಪಾತ್ರವನ್ನು ಕೊರೆಯುತ್ತದೆ. ನದಿಯ ಅಳಿವೆಯಲ್ಲಿ ಭರತದ ಕಾಲದಲ್ಲಿ ಹೆಚ್ಚು ನೀರು ಒಳಕ್ಕೆ ಬಂದು, ಇಳಿತದ ಕಾಲದಲ್ಲಿ ಈ ನೀರೂ ಮೇಲಿನಿಂದ ಬರುವ ನೀರೂ ಹೊರಕ್ಕೆ ಹೋಗಿ ತಳ ಕೊರೆಯುತ್ತದೆ. ನದಿಯ ಅಳಿವೆ ಕೆಳಭಾಗದಲ್ಲಿ ಕ್ರಮೇಣ ಅಗಲವಾಗಿ ನೀರು ಸಾಕಷ್ಟು ವೇಗದಿಂದ ಹರಿಯಬೇಕು. ಅಳಿವೆಯ ನಾಲೆ ಸರಿಯಾಗಿ ಕೆಲಸ ಮಾಡಬೇಕಾದರೆ ಅಲೆಯ ನೀರು ಒಳಕ್ಕೆ ಧಾರಾಳವಾಗಿ ಬರಬೇಕಾಗಿರುವುದರಿಂದ ಆ ಜಾಗದಲ್ಲಿ ಸೇತುವೆಯ ಕಂಬಗಳೂ ಬ್ಯಾರಾಜುಗಳು ಮತ್ತು ಬಂದರು ಕಟ್ಟೆಗಳನ್ನು ಸಾಕಷ್ಟು ಪರಿಶೀಲನಾ ನಂತರ ಸಂವಿಧಾನ ಮಾಡಬೇಕು.

  	ಸಾಮಾನು ಸರಂಜಾಮುಗಳನ್ನು ಹಡಗಿನಿಂದ ಇಳಿಸುವುದಕ್ಕೂ ತುಂಬುವುದಕ್ಕೂ ಸರಕು ಕಟ್ಟೆಗಳನ್ನು ಒಂದಕ್ಕೆ ಒಂದು ತೊಡರಿಕೊಳ್ಳುವ ಉಕ್ಕಿನ ಹಾಳೆಗಳ ಚೂಪು ದಸಿಗಳಿಂದ ನಿರ್ಮಿಸುತ್ತಾರೆ.

  	ನದಿಯ ಇಳಕಲು ಕಿಲೊಮೀಟರಿಗೆ 2.25 ಮೀಟರುಗಳಿಗಿಂತ ಹೆಚ್ಚಾಗಿಲ್ಲದ ಕಡೆಗಳಲ್ಲಿ ಜಲಯಾನ ಅಭಿವೃದ್ಧಿಯಾಗಿ ಕೆಲವು ಕಡೆ ಶಕ್ತಿಚಾಲಿತ ನಾಲೆಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ 1922ರಲ್ಲಿ ಕಾವೇರಿ ನದಿಯಲ್ಲಿ ಬಂದ ಹಾಗೆ ಮಹಾಪ್ರವಾಹ ಬಂದರೆ ಗದ್ದೆಗಳ ಮೇಲೂ ಊರುಗಳ ಮೇಲೂ ನುಗ್ಗಿ ಹಾವಳಿ ಮಾಡಬಹುದು. ಪ್ರತಿಯಾಗಿ 1966ರಲ್ಲಿ ಆದ ಹಾಗೆ ಮಳೆ ವಿಶಾಲವಾದ ಭೂಭಾಗದಲ್ಲಿ ಬರದೆ ಹೋದರೆ ನೀರಾವರಿಗೇ ಅಲ್ಲದೆ ಕುಡಿಯುವ ನೀರಿಗೂ ಪೇಚಾಟವಾಗಬಹುದು. ಈ ನೈಸರ್ಗಿಕವಾದ ಏರುಪೇರಿಗೆ ಪರಿಹಾರವಿಲ್ಲ. ಆದರೂ ನದಿಯ ಮೇಲಿನ ಸಾಗಣೆ ವ್ಯಾಪಾರಕ್ಕೆ ವಿಶೇಷವಾದ ಅನುಕೂಲತೆಗಳನ್ನು ಒದಗಿಸಿದೆ. ನದಿಯ ದಡದ ಮೇಲೆ ಕಾರ್ಖಾನೆಗಳು ಬೆಳೆದು ಅವುಗಳಿಂದ ಹೊರಬರುವ ರಾಸಾಯನಿಕಗಳು ನದಿಯ ನೀರನ್ನು ಕುಡಿಯಲು ಆಗದ ಹಾಗೆ ಕೆಡಿಸಬಹುದು. ಪಟ್ಟಣಗಳ ಗ್ರಾಮಸಾರ ನದಿಗೆ ಬೀಳುವುದಕ್ಕೆ ಮುಂಚೆ ಅದನ್ನು ಶುದ್ಧಿ ಮಾಡಬೇಕು. ನದೀಮುಖದ ಮೇಲುಗಡೆ ಎಷ್ಟು ದೂರ ಶಕ್ತಿಚಾಲಿತವಾದ ದೋಣಿಗಳು ಒಂದು ನಿಯತವಾದ ಕಾರ್ಯಕ್ರಮದ ಮೇಲೆ ಹೋಗಬಹುದೊ ಅದರ ಮೇಲೆ ಆ ನದಿಯ ಜಲಯಾನ ಯೋಗ್ಯತೆ ನಿರ್ಧಾರವಾಗುತ್ತದೆ. ಎಷ್ಟೊ ನದಿಗಳ ಮೇಲೆ ಸಮುದ್ರಯಾನ ಮಾಡಬಲ್ಲ ಹಡಗುಗಳು ಹೋಗುವುದೇ ಇಲ್ಲ. ಕೆಲವು ನದಿಗಳ ಮೇಲೆ ವ್ಯಾಪಾರದ ಸಾಗಣೆ ವಿಶೇಷವಾಗಿರುತ್ತದೆ. ಏಕೆಂದರೆ ಅವುಗಳ ಸಮುದ್ರದ ಕಡೆಯ ಕೊನೆಯಲ್ಲಿ ಬಂದರು ಸಾಮಾನನ್ನು ಇಳಿಸುವ ಕೇಂದ್ರವಾಗಿರುತ್ತದೆ. ಅಲ್ಲಿ ಸಮುದ್ರಗಾಮಿಗಳಾದ ಹಡಗುಗಳು ನಿಂತು ಒಳಗಿರುವ ಸಾಮಾನನ್ನು ದೋಣಿಗಳೊಳಕ್ಕೆ ಇಳಿಸುತ್ತದೆ. ಆ ದೋಣಿಗಳಿಂದ ಸಾಮಾನು ಒಳನಾಡಿನಲ್ಲಿರುವ ಎಲ್ಲ ಊರುಗಳಿಗೂ ರವಾನೆಯಾಗುತ್ತದೆ. ಹಾಗೆಯೇ ಈ ದೋಣಿಗಳು ಒಳನಾಡಿನಿಂದ ತಂದ ಸಾಮಾನುಗಳನ್ನು ಹಡಗಿಗೆ ತುಂಬಿ ಬೇರೆ ಬಂದರುಗಳಿಗೆ ಸಾಗಿಸುತ್ತವೆ. ದಕ್ಷಿಣ ಭಾರತದಲ್ಲಿ ಕೃಷ್ಣಾ ಮತ್ತು ಗೋದಾವರಿ ನದಿಗಳ ಮೇಲೆ ಈ ನಮೂನೆಯ ಸಾಗಣೆ ಸಾಮಾನ್ಯವಾಗಿದೆ. ಯೂರೋಪಿನಲ್ಲಿ ರಾಟರ್‍ಡ್ಯಾಮ್, ಆ್ಯಂಟ್ವರ್ಪ್ ಮತ್ತು ಹ್ಯಾಂಬರ್ಗ್ ಬಂದರುಗಳಲ್ಲಿ ಅಮೆರಿಕದಿಂದ ಬರುವ ಧಾನ್ಯವನ್ನು ಜಲಮಾರ್ಗಗಳ ಮೂಲಕ ಯೂರೋಪಿನ ಮೂಲೆಗಳಿಗೂ ಸಾಗಿಸುತ್ತಾರೆ. ಈ ದೋಣಿಗಳು ಸುಮಾರು 90 ಮೀಟರ್ ಉದ್ದವಾಗಿರುತ್ತವೆ. ಅಮಸಾನ್ ನದಿಯ ಮೇಲೆ ಬಂದರುಗಳು ಸಮುದ್ರದಿಂದ ನೂರಾರು ಕಿಲೊಮೀಟರುಗಳ ದೂರ ಒಳನಾಡಿನಲ್ಲಿವೆ. ವಾಣಿಜ್ಯದ ದೃಷ್ಟಿಯಿಂದ ಈ ನದಿ ಸಮುದ್ರದ ತೋಳು ಎನ್ನಬಹುದು. ಒಳನಾಡಿನ ನೀರಿನ ಮೇಲಿನ ಸಾಗಣೆ ಅತ್ಯಂತ ಮಿತವ್ಯಯದ ಸಾಗಣೆಯ ಮಾರ್ಗ. ಭೂಮಿಯ ಮೇಲೆ ಸಾಮಾನನ್ನು ಸಾಗಿಸಲು ಬಹಳ ಖರ್ಚು ಮಾಡಿದ ರಸ್ತೆ ಮತ್ತು ರೈಲು ಮಾರ್ಗಗಳು ಬೇಕು. ವಾಯುಮಾರ್ಗದಲ್ಲಿ ವಿಮಾನವನ್ನು ಸಾಗಿಸಲು ಬಲಿಷ್ಠ ಎಂಜಿನ್ನುಗಳು ಬೇಕು, ಆದರೆ ನದಿಯಾದರೊ ತನ್ನ ನೀರಿನ ಮೇಲೆಯೇ ಹಡಗುಗಳನ್ನು ಸಾಗಿಸುತ್ತದೆ. ಒಳನಾಡಿನ ಸಾಮಾನಿನ ದೋಣಿಗಳು ಸಾಗರಗಾಮಿಯಾದ ಹಡಗಿನಿಂದ ಸರಕನ್ನು ಪಕ್ಕದಿಂದಲೇ ತೆಗೆದುಕೊಳ್ಳುತ್ತವೆ.

  	ನದಿಯ ನಾಲೆಯ ಮೇಲ್ಪಾಡುಗಳು: ನದಿಯ ಏರಿಗಳು ಕೊರೆದು ಅದರ ದಾರಿ ಬದಲಾಗದಂತೆ ಏರಿಗಳಿಗೆ ಕಲ್ಲುಕಟ್ಟಡವನ್ನು ಕಟ್ಟಬಹುದು. ತಿರುವುಗಳನ್ನು ತಿದ್ದಲು ನಾಲೆಯ ದಾರಿಯನ್ನು ಕೊಂಚ ಬದಲಾಯಿಸಬಹುದು. ನದಿಗೆ ಅಡ್ಡವಾಗಿ ತಗ್ಗಾದ ಕಟ್ಟೆಗಳನ್ನು ಕಟ್ಟಿ ಮೇಲು ಭಾಗದಲ್ಲಿ ನೀರನ್ನು ನಿಲ್ಲಿಸಬಹುದು: ಅಥವಾ ಒಂದು ಹೊಸ ನಾಲೆಯನ್ನೇ ಅಗೆಯಬಹುದು.

  	ಸುಲಭವಾಗಿ ಕೊರೆದು ಹೋಗುವ ಮೆಕ್ಕಲು ಮಣ್ಣಿನ ಮೇಲೆಯೂ ತಿರುವುಗಳಲ್ಲಿಯೂ ಹರಿಯುವ ನದಿಗಳಲ್ಲಿ ಸಾಮಾನ್ಯವಾದ ಪ್ರವಾಹವನ್ನು ಒಂದೇ ನಾಲೆಯಲ್ಲಿ ಬಿಡಲು ಅವುಗಳ ಪಾತ್ರವನ್ನು ಕಿರಿದಾಗಿ ಮಾಡಬೇಕಾಗುತ್ತದೆ. ಈ ಹೊಸ ಪಾತ್ರವನ್ನು ನೇರವಾಗಿ ಮಾಡದೆ ನಯವಾದ ತಿರುವುಗಳಲ್ಲಿ ತೆಗೆದುಕೊಂಡು ಹೋಗಬೇಕು. ತಿರುವುಗಳ ಒಳಭಾಗದಲ್ಲಿ ಕಲ್ಲಿನ ಪರಸನ್ನು ಕಟ್ಟಬಹುದು. ತಿದ್ದಿದ ನಾಲೆಯ ಸ್ಥಾನ ಹಿಂದಿನದಕ್ಕಿಂತ ಬಹಳ ವ್ಯತ್ಯಾಸವಾಗಿದ್ದರೆ ಒಳಬಾಗಿನ ದಡಗಳನ್ನು ಅಗೆದು ಪರಸನ್ನು ಕಟ್ಟಿ ಮಾರ್ಗದರ್ಶಕ ನಾಲೆಯನ್ನು ಅಗೆದು ನದಿಯನ್ನು ಅದರಲ್ಲಿ ಬಿಡಬಹುದು. ಉಳಿದ ಕಡೆಗಳಲ್ಲಿ ನಾಲೆಯನ್ನು ಕೆಲವು ಮಟ್ಟಗಳಲ್ಲಿ ಕಿರಿದಾಗಿ ಮಾಡಿ ಎದುರಿನ ದಡ ಅವಶ್ಯವಾದಷ್ಟು ಕೊರೆಯುವ ಹಾಗೆ ಮಾಡಬಹುದು.
 
 	ಕೆಲವು ನದಿಗಳಲ್ಲಿ ಅಲ್ಲಲ್ಲಿ ತಗ್ಗಾದ ಕಟ್ಟೆಗಳನ್ನು ಕಟ್ಟಿ ಕೊಳಗಳನ್ನು ನಿರ್ಮಿಸಿ ಜಲಯಾನಕ್ಕೆ ಅವಶ್ಯವಾದ ಆಳವನ್ನು ಪಡೆಯಬಹುದು. ಅಂಥ ಕಟ್ಟೆಗಳಲ್ಲಿ ಮಟ್ಟ ಬದಲಾವಣೆಯ ಕಟ್ಟೆಗಳನ್ನು ಕಟ್ಟಿ, ಹಡಗುಗಳನ್ನು ಒಂದು ಮಟ್ಟದಿಂದ ಇನ್ನೊಂದಕ್ಕೆ ಸಾಗಿಸಬೇಕಾಗುತ್ತದೆ.

  	ಎರಡು ಜಲಮಾರ್ಗಗಳಿಗೆ ನಡುವೆ ಸಂಬಂಧವನ್ನು ಕಲ್ಪಿಸಲು ನಾಲೆಗಳನ್ನು ತೋಡಬೇಕಾಗುತ್ತದೆ. ಇವು ಸುಯೆಜ್ ನಾಲೆಯ ಹಾಗೆ ತೆರೆದ ನೀರಿನ ದಾರಿ ಆಗಿರಬಹುದು; ಇಲ್ಲವೆ ಪನಾಮ ನಾಲೆಯಂತೆ ತೊಡಕಾದ ತೋಡುದಾರಿ ಆಗಿರಬಹುದು; ಅಥವಾ ಅಮೆರಿಕದ ಸೇಂಟ್ ಲಾರೆನ್ಸ್ ನದಿಯಲ್ಲಿರುವ ಹಾಗೆ ತೆರೆದ ನಾಲೆ, ಮಟ್ಟ ಬದಲಾವಣೆಯ ಕಟ್ಟೆ ಮತ್ತು ಕಾಂಕ್ರೀಟಿನ ಕಟ್ಟೆಗಳ ಸಮಾವೇಶ ಆಗಿರಬಹುದು.

  	ನದಿ ಹರಿಯುವ ಮಾರ್ಗಕ್ಕೂ ಅದರ ಕಣಿವೆಯ ಇಳುಕಲಿಗೂ ಸಂಬಂಧವಿದೆ. ಬಹಳ ಚಪ್ಪಟೆಯಾದ ಇಲ್ಲವೆ ಹೆಚ್ಚಿನ ಇಳುಕಲಿನ ಕಣಿವೆಗಳಲ್ಲಿ ನದಿಗಳು ನೇರವಾಗಿ ಹರಿಯುತ್ತವೆ. ಮಧ್ಯಮ ಇಳುಕಲಿನ ಕಣಿವೆಯಲ್ಲಿ ತಿರುವುಗಳಿಂದ ಕೂಡಿ ಬಳಸಾಗಿ ಹರಿಯುತ್ತದೆ. ನದಿಯ ಅಗಲವೂ ಆಳವೂ ಎಲ್ಲ ಭಾಗಗಳಲ್ಲಿಯೂ ಸುಮಾರಾಗಿ ಒಂದೇ ಆಗಿರುವ ಕಡೆಗಳಲ್ಲಿ ಕಡಿದಾದ ಇಳುಕಲಿರುವ ಕಡೆ ಜಡೆಗಳಾಗಿ ಹರಿಯುತ್ತವೆ. ಆದರೆ ನದಿಯ ಅಗಲವೂ ಒಂದು ಜಾಗದಿಂದ ಇನ್ನೊಂದಕ್ಕೆ ವಿಶೇಷವಾಗಿ ಬದಲಾಗುವ ಕಡೆಗಳಲ್ಲಿ ಎಲ್ಲ ಇಳಕಲುಗಳಲ್ಲಿಯೂ ಜಡೆಗಳಂತೆ ಇರುವ ನಾಲೆಗಳನ್ನು ಕಾಣಬಹುದು.

  	ನದಿಯ ಪಾತ್ರದಲ್ಲಿ ಸರೋವರಗಳು: ನದಿಯ ಕಣಿವೆಯ ಒಂದು ಭಾಗದಲ್ಲಿ ದೊಡ್ಡ ಹಳ್ಳವಿದ್ದು ಅದರ ಕೆಳಗಡೆ ಕಲ್ಲಿನ ಬಂಡೆ ಸಂಪೂರ್ಣವಾಗಿ ಅಡ್ಡವಾಗಿದ್ದರೆ ನದಿಯ ಪಾತ್ರದಲ್ಲಿಯೇ ಸರೋವರ ನಿರ್ಮಾಣವಾಗುತ್ತದೆ. ಆಗ ನದಿಯಲ್ಲಿರುವ ಗೋಡು ಮಣ್ಣೆಲ್ಲ ಸರೋವರದ ತಳದಲ್ಲಿ ನಿಲ್ಲುತ್ತದೆ. ಕೆಳಭಾಗದಲ್ಲಿ ಸರೋವರ ಸ್ವಚ್ಛವಾದ ನೀರಿನಿಂದ ತುಂಬಿರುತ್ತದೆ.

  	ನದಿಯ ಉಬ್ಬರವಿಳಿತಗಳು: ಉಬ್ಬರವಿಳಿತಗಳು ಸಮುದ್ರಕ್ಕೆ ನೇರವಾಗಿ ಬೀಳುವ ನದಿಗಳಲ್ಲಿ ಮಾತ್ರ ಸಾಧ್ಯ. ಇವು ಸಮುದ್ರದ ಉಬ್ಬರವಿಳಿತಗಳಿಂದ ಮೂರು ವಿಧಗಳಲ್ಲಿ ಕೊಂಚ ಭಿನ್ನವಾಗಿವೆ.
ಅಲೆ ನದಿಯ ಮೇಲುಭಾಗಕ್ಕೆ ಚಲಿಸುವ ವೇಗ ನಾಲೆಯ ಆಳಕ್ಕೆ ಅನುಗುಣವಾಗಿರುತ್ತದೆ.
ನದಿಯ ಮೇಲುಭಾಗಕ್ಕೆ ಹೋದ ಹಾಗೆ ಇಳಿಯುವ ಅಲೆಯ ಅವಧಿ ಹೆಚ್ಚು. ಹಾಗೆಯೇ ಏರುವ ಅಲೆಯ ಅವಧಿ ಕಡಿಮೆ. ನದಿಯ ಮೇಲುಭಾಗದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಇರಬಹುದಾದ ನೀರಿನ ಆಳದ ವ್ಯತ್ಯಾಸವೂ ಈ ವ್ಯತ್ಯಾಸಕ್ಕೆ ಒಂದು ಕಾರಣ. ಇದಲ್ಲದೆ ನದಿಯಲ್ಲಿಯ ನೀರಿನ ಪ್ರಮಾಣವೂ ವ್ಯತ್ಯಾಸವಾಗಬಹುದು. ಆಗ ಏರುವ ಅಲೆ ಚುರುಕಾಗುತ್ತದೆ. ಇಳಿಯುವ ಅಲೆ ಸಾವಕಾಶವಾಗುತ್ತದೆ.

  	ಮೇಲಕ್ಕೆ ಹೋದ ಹಾಗೆ ಉಬ್ಬರವಿಳಿತದ ವ್ಯಾಪ್ತಿಯೂ ಕಡಿಮೆ ಆಗುತ್ತದೆ. ಇದಕ್ಕೆ ನೀರು ನದಿಯ ದಡಗಳಿಗೂ ತಳಕ್ಕೂ ಉಜ್ಜುವಾಗ ಅದರ ಸಾಮಥ್ರ್ಯ ಕಡಿಮೆ ಆಗುವುದೂ ಒಂದು ಕಾರಣ. ಆದರೆ ಈ ಜಾಗದಲ್ಲಿಯೇ ಕಿರಿದಾದರೆ ಉಬ್ಬರವಿಳಿತದ ವ್ಯಾಪ್ತಿ ಸ್ವಲ್ಪ ಹೆಚ್ಚಾಗಬಹುದು. ನದಿಯಲ್ಲಿ ಏರುವ ಮತ್ತು ಇಳಿಯುವ ಅಲೆಗಳ ನಡುವೆ ನೀರಿನ ಆಳದ ವ್ಯತ್ಯಾಸವೂ ಹೆಚ್ಚಾಗಿರಬಹುದು. ಇದರಿಂದ ಎತ್ತರವಾದ ಅಲೆಗಳು ಚಲಿಸುವ ವೇಗಕ್ಕೂ ತಗ್ಗಾದ ಅಲೆಗಳ ವೇಗಕ್ಕೂ ವ್ಯತ್ಯಾಸವಾಗಬಹುದು.

  	ನದಿಗಳಿಂದ ಮಾನವನಿಗೆ ಉಪಯೋಗ: ನದಿಗಳ ನೀರನ್ನು ದಡದಲ್ಲಿರುವ ಹಳ್ಳಿ ಮತ್ತು ಪಟ್ಟಣಗಳಲ್ಲಿ ಕುಡಿಯುವುದಕ್ಕೂ ಕೈಗಾರಿಕೆಗಳಿಗೂ ನೀರಾವರಿಗೂ ಉಪಯೋಗಿಸುತ್ತಾರೆ. ನದಿಯ ಗೋಡಿನಿಂದ ಫಲವತ್ತಾದ ಪ್ರವಾಹದ ಬಯಲುಗಳನ್ನು ಬೇಸಾಯಕ್ಕಾಗಿ ಬಳಸಿ, ದಡಗಳ ಮೇಲೆ ಜನರು ಸೌಖ್ಯವಾಗಿ ಬಾಳುತ್ತಾರೆ. ದಕ್ಷಿಣ ಭಾರತದಲ್ಲಿ ತಂಜಾವೂರಿನ ಬಳಿ ಕಾವೇರಿ ನದಿಯ ಕುದುರಿನಲ್ಲಿ ಜನ ಬಹುಕಾಲದಿಂದಲೂ ಸೌಖ್ಯವಾಗಿ ಬಾಳುತ್ತಿರುವುದಕ್ಕೆ ಆ ನದಿಯ ನೀರೇ ಕಾರಣ. ನದಿಯ ಇಳುಕಲು ಅತಿಯಾಗಿ ಇರದ ಕಡೆಗಳಲ್ಲಿ ದೋಣಿಗಳಿಂದಲೇ ಅಲ್ಲದೆ ಆವಿಯ ಹಡಗುಗಳಿಂದಲೂ ಜಲಯಾನ ಸಾಮಾನ್ಯವಾಗಿದೆ. ಆದರೆ ಇಲ್ಲಿ ಅನಾನುಕೂಲತೆಗಳೇ ಇಲ್ಲವೆಂದು ಹೇಳಲಾಗದು. 1965ರಲ್ಲಿ ಆದ ಹಾಗೆ ಮಳೆ ಬರದೆ ಹೋದರೆ ನೀರಾವರಿಗೇ ಅಲ್ಲದೆ ಜನರು ಕುಡಿಯುವ ನೀರಿಗೂ ತೊಂದರೆಯಾಗಬಹುದು. ಇದಕ್ಕೆ ಪ್ರತಿಯಾಗಿ 1924ರಲ್ಲಿ ಬಂದಂತೆ ಅಭೂತಪೂರ್ವವಾದ ಮಹಾಪ್ರವಾಹ ಬಂದರೆ ನೀರಾವರಿಯ ಭೂಮಿ ತಾತ್ಕಾಲಿಕವಾಗಿ ಮುಳುಗಿಹೋಗಬಹುದು. ಜಲಯಾನ ಇರುವ ಕಡೆ ಅದು ಮಹಾ ಪ್ರವಾಹದ ಕಾಲದಲ್ಲಿಯೇ ಅಲ್ಲದೆ ಜಲಕ್ಷಾಮದಲ್ಲಿಯೂ ನಿಲ್ಲುತ್ತದೆ. ಶಿವಸಮುದ್ರದಲ್ಲಿ ವಿದ್ಯುಜ್ಜನಕ ಯಂತ್ರಗಳನ್ನು ಕಾವೇರಿಯ ಜಲಪಾತದ ಬಳಿ ಇಟ್ಟಿದ್ದಾರೆ. ಮಳೆಯಿಲ್ಲದೆ ನೀರು ಬತ್ತಿದಾಗ ವಿದ್ಯುಜ್ಜನಕ ಯಂತ್ರಗಳು ಕೆಲಸ ಮಾಡಲಾರವು. ಆಗ ಮಾನವ ಅಸಹಾಯಕನಾಗುತ್ತಾನೆ. 
												(ಎಚ್.ಸಿ.ಕೆ.) 
         											ಪರಿಷ್ಕರಣೆ:
ಎಂ. ಜಿ. ಶ್ರೀನಿವಾಸನ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ